ನುಗ್ಗೆ -
	ಮೊರಿಂಗೇಸೀ ಕುಟುಂಬಕ್ಕೆ ಸೇರಿದ ಒಂದು ಉಪಯುಕ್ತ ಸಸ್ಯ. (ಹಾರ್ಸ್ ರ್ಯಾಡಿಷ್). ಮೋರಿಂಗ ಓಲಿಯಿಫೆರ ಎಂಬುದು ವೈಜ್ಞಾನಿಕ ಹೆಸರು. ಇದರ ತವರು ಭಾರತ. ಉಷ್ಣವಲಯ ದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. 

	ಇದು 8-10 ಮೀಟರ್ ಎತ್ತರಕ್ಕೆ ಬೆಳೆಯುವ ಚಿಕ್ಕಮರ. ಇದರ ಕಾಂಡ ಮೃದು; ತೊಗಟೆ ಬೆಂಡಿನಂತೆ ಬೆಳೆವ ಎಳೆಯ ಭಾಗಗಳು ಮೃದು ತುಪ್ಪಳದಂತಿವೆ. ಎಲೆಗಳು ಬಹುಪಾಲು ತ್ರಿಪಿಚ್ಛಕ ಸಂಯುಕ್ತ ಮಾದರಿಯವು; ಎಲೆಗಳ ಉದ್ದ ಸುಮಾರು 50 ಸೆಂಮೀ. ಬಿಡಿ ಎಲೆಗಳು ಸುಲಭವಾಗಿ ಬಿದ್ದು ಹೋಗುವಂಥವು. ಎಲೆಗಳ ಬುಡದಲ್ಲಿ ತೆಳುವಾದ, ಗುಂಗುರಾದ, ಕಾಲಕಾಲಕ್ಕೆ ಉದುರುವ ವೃಂತ ಪತ್ರಗಳುಂಟು. ಯಾವುದೇ ನಿರ್ದಿಷ್ಟ ಕ್ರಮವಿಲ್ಲದ, ಶಿಥಿಲಪುಷ್ಪಗುಚ್ಛದಲ್ಲಿ ಪುಷ್ಪಗಳು ಅರಳುವುವು. ಹೂಗಳು ದ್ವಿಲಿಂಗಿಗಳು; ಅವುಗಳ ಬಣ್ಣ ಬಿಳಿ. ಹೂ ಬಿಡುವ ಕಾಲ ಫೆಬ್ರವರಿಯಿಂದ ಏಪ್ರಿಲ್. ನುಗ್ಗೆಕಾಯಿ ಸುಮಾರು 45 ಸೆಂಮೀ. ಉದ್ದದ ಕೋಲಿನಂತಿದೆ. ಇದರ ಮೇಲೆ ಅನೇಕ ಗೆಣ್ಣುಗಳನ್ನು ಗಮನಿಸಬಹುದು. ಒಳಗೆ ಮುಮ್ಮೂಲೆಯ ರೆಕ್ಕೆಯುಕ್ತ ಬೀಜಗಳುಂಟು.

	ಎಲೆ, ಹೂವು ಮತ್ತು ಎಳೆಯ ಕಾಯಿಗಳನ್ನು ಭಾರತದಲ್ಲಿ ತರಕಾರಿಯಾಗಿ ಬಳಸುತ್ತಾರೆ. ನುಗ್ಗೆ ಬೀಜದಿಂದ ಎಣ್ಣೆಯನ್ನು ತೆಗೆಯುವುದುಂಟು. ಇದನ್ನು ಉದ್ದೀಪನ ಹಾಗೂ ಪ್ರತ್ಯುದ್ರೇಕಕಾರಕವಾಗಿ ಬಳಸುವರು. ಕ್ಯಾಲಿಕೊ ಮುದ್ರಣದಲ್ಲಿ ಉಪಯೋಗಿಸುವುದೂ ಉಂಟು. ತೊಗಟೆಯಿಂದ ಪಡೆದ ಒರಟು ನಾರಿನಿಂದ ಚಾಪೆ, ಕಾಗದ, ಹಾಗೂ ಹಗ್ಗಹುರಿಗಳನ್ನು ತಯಾರಿಸಬಹುದು.

	ಉಪಯುಕ್ತವಾದ ಈ ಸಸ್ಯವನ್ನು ಮನೆಯ ಸುತ್ತ ಮುತ್ತ ಬೆಳೆಸುತ್ತಾರೆ. ಕಾಲಕಾಲಕ್ಕೆ ಕಾಂಡವನ್ನು ಕಡಿದು ಹಾಕಿದರೆ ಮತ್ತೆ ಚಿಗುರಿ ಹೆಚ್ಚು ಫಲವನ್ನು ನೀಡುವುದರಿಂದ ನುಗ್ಗೆಯನ್ನು ಮುರಿದು ಬೆಳೆಸು ಎಂಬ ಮಾತು ವಾಡಿಕೆಯಲ್ಲಿದೆ.
(ಎಸ್.ಎಸ್.ಎಂ.ಯು;ಎಸ್‍ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ